
9th July 2025
*ಗುರಿ ತೋರಿದ ಗುರುವಿಗೊಂದು ನಮನ*
*ಗುರು ಪೌರ್ಣಿಮೆ* ೧೦.೭.೨೦೨೫
ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ।
ಗುರು ಸಾಕ್ಷಾತ್ ಪರಬ್ರಹ್ಮ।
ತಸ್ಮೈ ಶ್ರೀ ಗುರವೇ ನಮಃ||
ನಾವೆಲ್ಲರೂ ಮನೆ ಮತ್ತು ಶಾಲೆಯಲ್ಲಿ ಕಲಿತ ಮೊದಲ ಶ್ಲೋಕ ಇದಾಗಿತ್ತು. ಗುರು ಎಂದರೆ ಕೇವಲ ಅಕ್ಷರ ಕಲಿಸುವ ಶಿಕ್ಷಕ ಮಾತ್ರವಲ್ಲದೆ, ನಮ್ಮನ್ನು ಅಂಧಕಾರದಿಂದ ಬೆಳಕಿನಡೆಗೆ ಕರೆದೊಯ್ಯುವ ಮಾರ್ಗದರ್ಶಕನೆಂದರೆ ತಪ್ಪಾಗಲಾರದು. ನಮ್ಮ ತಪ್ಪುಗಳನ್ನು ತಿದ್ದುತ್ತ, ಗುರಿಯೆಡೆಗೆ ಚಲಿಸಲು ಪ್ರೇರಣೆ ನೀಡುವ ದೈವ ಸ್ವರೂಪನೇ ಈ ಗುರು. ಹಿಂದೂಗಳು ಮತ್ತು ಬೌದ್ಧ ಧರ್ಮದವರು ಗುರುವಿಗೆ ಕೃತಜ್ಞತೆಯನ್ನು ತಿಳಿಸಲು ಆಚರಿಸುವ ಹಬ್ಬವೇ ಈ ಗುರುಪೂರ್ಣಿಮೆ. ಇದನ್ನು ಆಷಾಢ ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯೆಂದು ಸಹ ಕರೆಯಲಾಗುತ್ತದೆ.
ಆಷಾಢ ಮಾಸದ ಹುಣ್ಣಿಮೆಯ ದಿನವು ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬರುತ್ತದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರ ವಾಣಿಯನ್ನು ಸ್ಮರಿಸುತ್ತ ಅಧ್ಯಾತ್ಮಿಕ ಗುರುವಿಗೆ, ಶಿಕ್ಷಣ ನೀಡಿದ ಗುರುವಿಗೆ ಭಯಭಕ್ತಿಯಿಂದ ಪೂಜೆ ಸಲ್ಲಿಸುವ ಪರಿಪಾಠ ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿದೆ. ಈ ದಿನ ಗುರು ಸೂತ್ರದ ಪ್ರಭಾವ ಇತರೆ ದಿನಗಳಿಗಿಂತ ಸಾವಿರ ಪಟ್ಟು ಅಧಿಕ ಪ್ರಭಾವಶಾಲಿಯಾಗಿರುತ್ತದೆ. ಅಜ್ಞಾನವನ್ನು ಕಳೆದು ಸುಜ್ಞಾನ ನೀಡುವ ಗುರು ನಮ್ಮಜೀವನದ ಅವಿಭಾಜ್ಯ ಅಂಗವಾಗಿಯೇ ನಮ್ಮೊಂದಿಗೆ ಇರುತ್ತಾರಲ್ಲವೇ?
ಗುರುಪೂರ್ಣಿಮೆಯ ಹಿನ್ನೆಲೆಯನ್ನು ಗಮನಿಸಿದಾಗ ಪರಮೇಶ್ವರನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಆದಿಗುರುವಾದನಂತೆ. ಹಾಗಾಗಿಯೇ ಶಿವನನ್ನು ಯೋಗ, ನೃತ್ಯ, ಗಾಯನದ ಆದಿಗುರುವೆಂದೇ ಪರಿಗಣಿಸಲಾಗುತ್ತದೆ. ಮತ್ತೊಂದು ಉಲ್ಲೇಖದ ಪ್ರಕಾರ ಆಷಾಢ ಪೌರ್ಣಮಿಯ ದಿನದಂದೇ ಮಹಾಭಾರತವನ್ನು ರಚಿಸಿದ ವೇದವ್ಯಾಸರ ಜನ್ಮದಿನವೆಂದು ಹೇಳಲಾಗುತ್ತದೆ. ಹಿಂದೂ ಸಂಪ್ರದಾಯದ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆಯಾರಂಭಿಸಿದರು. ಈ ದಿನ ಶುಕ್ಲ ಪಕ್ಷವು ಕೊನೆಗೊಳ್ಳುತ್ತದೆ. ವೇದವ್ಯಾಸರು ಅಂದು ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ವೇದಗಳನ್ನಾಗಿ ವಿಭಾಗಿಸಿದರು. ತಮ್ಮ ನಾಲ್ಕು ಜನ ಮುಖ್ಯ ಶಿಷ್ಯರಿಗೆ ಇದನ್ನು ಬೋಧಿಸುವ ಮೂಲಕ ವೈದಿಕ ಅಧ್ಯಯನಕ್ಕೆ ಅಡಿಪಾಯ ಹಾಕಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ ಎಂಬ ಗೌರವ ನಾಮ ದೊರೆಯಿತು. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಅಲ್ಲದೇ ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದು ಆಚರಿಸಲಾಗುತ್ತದೆ.
ಈ ದಿನವನ್ನು ಬೌದ್ಧ ಧರ್ಮೀಯರು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ದಿನವೆಂದು ಸ್ಮರಿಸುತ್ತಾರೆ. ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶವನ್ನು ಇದೇ ಆಷಾಢ ಪೂರ್ಣಿಮೆಯಂದು ನೀಡಿದ ಪರಿಣಾಮವಾಗಿ ಈ ದಿನ ಅವರಿಗೆ ಬೌದ್ಧ ಪೌರ್ಣಿಮೆಯಾಗಿದೆ.
ಗುರುಪೂರ್ಣಿಮೆಗೆ ಭಾರತೀಯ ಸಾಂಪ್ರದಾಯದಲ್ಲಿ ಧಾರ್ಮಿಕ ಪ್ರಾಮುಖ್ಯತೆಯನ್ನು ನೀಡಲಾಗಿದೆ. ನಂಬಿದ ಅಥವಾ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಶ್ರದ್ಧೆ ಮತ್ತು ಭಕ್ತಿಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಂದಿನಿಂದ ಮಳೆಗಾಲ ಪ್ರಾರಂಭವೆಂದು, ಮಳೆಗಾಲದ ಈ ನಾಲ್ಕು ತಿಂಗಳುಗಳ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾ ಒಂದೇ ಸ್ಥಳದಲ್ಲಿದ್ದು, ಭಕ್ತಾದಿಗಳಿಗೆ ಪ್ರವಚನ ಮತ್ತು ಮಾರ್ಗದರ್ಶನಗಳನ್ನು ನೀಡುತ್ತಾರೆ. ಹಿಂದೂಗಳು ತಮ್ಮ ತಮ್ಮ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ಸ್ಮರಿಸಿಕೊಂಡು ಅವರಿಗೆ ಗೌರವಪೂರ್ವಕವಾಗಿ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸುತ್ತಾರೆ. ವಿಧವಿಧವಾದ ಹೂವು ಹಣ್ಣುಗಳ ಅಲಂಕಾರದೊಂದಿಗೆ, ಹಲವು ಸಾಂಕೇತಿಕ ಕಾಣಿಕೆಗಳನ್ನು ಅರ್ಪಿಸಿ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸುತ್ತಾರೆ. ಯಾವ ಗುರುವಿನ ಮೂಲಕ ಭಗವಂತನು ತನ್ನೆಲ್ಲ ಶಿಷ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ಗುರು ಗೀತಾ ಮಂತ್ರದ ಪಠಣವನ್ನು ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಹೋಮ ಹವನ, ಭಜನೆ, ಸಂಕೀರ್ತನೆ, ಅನ್ನ ದಾಸೋಹಗಳನ್ನು ಆಯೋಜಿಸುತ್ತಾರೆ. ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಷ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ. ಹಾಗೆಯೇ ಪ್ರತಿ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆಯೆಂದು ಸಂಕಲ್ಪಿಸುತ್ತಾರೆ. ಭಾರತೀಯ ಶಾಸ್ತ್ರೀಯ ಸಂಗೀತ, ಯೋಗಾಭ್ಯಾಸ, ಶಾಸ್ತ್ರೀಯ ನೃತ್ಯವು ಗುರು ಶಿಷ್ಯ ಪರಂಪರೆಯನ್ನು ಅನುಸರಿಸುವುದರಿಂದ, ಜಗತ್ತಿನಾದ್ಯಂತ ಕಲಾವಿದರು ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಈ ದಿನಕ್ಕೆ ವಿಶೇಷ ಮಾನ್ಯತೆಯಿದೆ. ನಮಗೆ ವಿದ್ಯೆ ಕಲಿಸಿದ ಗುರುಗಳಿಗೆ, ಬದುಕನ್ನು ಕಟ್ಟಿಕೊಟ್ಟ ಮಾರ್ಗದರ್ಶಿಗಳಿಗೆ, ತಿದ್ದಿ ಬುದ್ದಿಯನ್ನು ಹೇಳಿ, ಗುರಿ ತೋರಿದ ಗುರುವರ್ಯರ ಪಾದಾರವಿಂದಗಳಿಗೆ ನತಮಸ್ತಕ ನಮಸ್ಕಾರ ಸಲ್ಲಿಸಿ ಕೃತಾರ್ಥರಾಗೋಣವೇ?
✍🏻 *ಲತಾ ಕೆ.ಎಸ್.ಹೆಗಡೆ*
ಬೆಂಗಳೂರು
ಅಂತಾರಾಷ್ಟ್ರೀಯ ಕವಿ ಕುಲಪತಿ ಪ್ರಶಸ್ತಿ ಗೆ. ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು.ರವರು ಆಯ್ಕೆ